Monday, December 23, 2013

Neenu mugilu naanu nela

ಆಕಾಶದಲ್ಲಿ ತೇಲುತ್ತಿರುವ ಮೋಡಗಳು ಭೂಮಿಯನ್ನಗಲಿ ಎಷ್ಟು ದೂರದಲ್ಲಿದ್ದರೇನು, ಅವೆರಡರ ನಡುವಿನ ಸಂಬಂಧದ ಪರಿಣಾಮ ಪ್ರಕೃತಿಯಲ್ಲಿ ವರ್ಣರಂಜಿತವಾಗಿ ತೋರುವುದಿಲ್ಲವೇ. ಆಗಸದಲ್ಲಿ ದೂರದಲ್ಲಿದ್ದರೇನಂತೆ ಅವೆರಡರ ಒಡನಾಟ ಕಣ್ಣು-ರೆಪ್ಪೆಗಳಷ್ಟೇ ಸಮೀಪ ಅಲ್ಲವೇ. ಭೂಮಿ-ಬಾನುಗಳ ಉದಾಹರಣೆಯೊಂದಿಗೆ, ಪ್ರೀತಿ-ಬಾಂಧವ್ಯಗಳ ಸೆಳೆತ ಎರಡು ಜೀವಗಳ ಅಂತರವನ್ನು ಮೀರಿ ಹೇಗೆ ವ್ಯಾಪಿಸುತ್ತದೆ ಎಂಬ ಭಾವ ಕವಿಯ ಮಾತುಗಳಲ್ಲಿ ಹೀಗೆ ಹೊಮ್ಮಿದೆ.

  ನೀನು ಮುಗಿಲು, ನಾನು ನೆಲ; ನಿನ್ನ ಒಲವೆ, ನನ್ನ ಬಲ;
  ನಮ್ಮಿಬ್ಬರ ಮಿಲನದಿಂದ, ಉಲ್ಲಾಸವೇ ಶ್ಯಾಮಲಾ.

  ನಾನು ಎಳೆವೆ, ನೀನು ಮಣಿವೆ; ನಾನು ಕರೆವೆ, ನೀನು ಸುರಿವೆ;
  ನಮ್ಮಿಬ್ಬರ ಒಲುಮೆ ನಲುಮೆ ಜಗಕಾಯಿತು ಹುಣ್ಣಿಮೆ.
  ನಾನಚಲದ ತುಟಿಯೆತ್ತುವೆ, ನೀ ಮಳೆಯೊಳು ಮುತ್ತನಿಡುವೆ;
  ನಿನ್ನಿಂದಲೇ, ತೆರೆವುದೆನ್ನ ಚೈತನ್ಯದ ಕಣ್ಣೆವೆ.

  ಸೂರ್ಯ ಚಂದ್ರ ಚಿಕ್ಕೆಗಣ್ಣ, ತೆರೆದು ನೀನು ಸುರಿವ ಬಣ್ಣ;
  ಹಸಿರಾಯಿತು, ಹೂವಾಯಿತು, ಚೆಲುವಾಯಿತು ಈ ನೆಲ.
  ನೀನು ಗಂಡು ನಾನು ಹೆಣ್ಣು, ನೀನು ರೆಪ್ಪೆ ನಾನು ಕಣ್ಣು;
  ನಮ್ಮಿಬ್ಬರ ಮಿಲನದಿಂದ ಸುಫಲವಾಯ್ತು ಜೀವನ;

  - ರಚನೆ : ರಾಷ್ಟ್ರಕವಿ ಶ್ರೀ ಜಿ.ಎಸ್. ಶಿವರುದ್ರಪ್ಪ


ಕವಿ ಜಿ.ಎಸ್.ಎಸ್ ರವರು ಪರಲೋಕವಾಸಿಗಳಾದ ಈ ದಿನ, ಅವರ ಆತ್ಮಕ್ಕೆ ಶಾಂತಿ ಕೋರುತ್ತ, ಭಾವಪೂರ್ಣ ಶ್ರದ್ಧಾಂಜಲಿಯೊಂದಿಗೆ ಈ ರಚನೆಯನ್ನು ಅಂತರ್ಜಾಲದಲ್ಲಿ ತುಳುಕಿಸುತ್ತಿದ್ದೇನೆ. ಕವಿ ಹೃದಯಕ್ಕೆ ನನ್ನ ಪುಟ್ಟ ನಮನ.

No comments: