Sunday, December 8, 2013

Krishnana shyamala vakshadamele

ಶ್ರೀ ಕೃಷ್ಣ ಮತ್ತು ರಾಧೆಯರ ನಡುವಿನ ಪ್ರೀತಿಗೆ ಭಾವಪರವಶರಾಗದವರು ಯಾರು. ಆ ಪವಿತ್ರ ಪ್ರೇಮದ ಬಗೆಗೆ ತಿಳಿದು ನಾನು ಹಲವೊಮ್ಮೆ ಅಸೂಯೇಪಡುವುದುಂಟು. ಸಂಬಂಧಗಳನ್ನು ವ್ಯಾವಹಾರಿಕ ಭಾವನೆಗಳಿಂದ ಅಳೆಯುವುದರಲ್ಲಿ ಮೈ ಮರೆತಿರುವ ಸಮಾಜದಲ್ಲಿ ಇಂತಹ ಪವಿತ್ರವಾದ ಪ್ರೀತಿಯ ಕಥೆಯನ್ನು ಕೀಳಿ ಮೈ ಪುಳಕಿತಗೊಳ್ಳುವುದಿಲ್ಲವೇ. ಕೃಷ್ಣ ರಾಧೆಯರ ಸರಸ ಸಲ್ಲಾಪಗಳಲ್ಲಿ ಮಗ್ನರಾಗಿದ್ದಾಗ ಕಂಡ ದೃಶ್ಯವನ್ನು ಕವಿಯೊಬ್ಬರು ವರ್ಣಿಸಿದ್ದು ಇಂತು:

ಕೃಷ್ಣನ ಶ್ಯಾಮಲ ವಕ್ಷದ ಮೇಲೆ, ಕಾಳ ನಾಗರವು ಹರಿಯುತಿದೆ;
ನಾಗರವಲ್ಲ, ನಾಗವೇಣಿಯ ನೀಳ್ಜಡೆ ಮೆರೆಯುತಿದೆ;
ನೋಡು, ನೀಳ್ಜಡೆ ಮೆರೆಯುತಿದೆ;

ಕೃಷ್ಣನ ನೈದಿಲೆ ಕೆನ್ನೆಯ ಮೇಲೆ, ರಕ್ತದ ಬಿಂದುವು ಕಾಣುತಿದೆ;
ರಕ್ತವು ಅಲ್ಲ, ಬಿಂಬಾಧರೆಯ ಬಿಂದಿಯು ಮೆರೆಯುತಿದೆ;
ನೋಡು ಬಿಂದಿಯು ಮೆರೆಯುತಿದೆ;

ಕೃಷ್ಣನ ಚಾಚಿದ ತೋಳಿನ ಮೇಲೆ, ಹೆಡೆಯಿಲ್ಲದ ಕಾಮನಬಿಲ್ಲು;
ಬಿಲ್ಲದು ಅಲ್ಲ, ಮಾನಿನಿಯಲ್ಲೇ ಮೇಲುದು ಮರೆತಿಹಳು;
ನೋಡು ಮೇಲುದು ಮರೆತಿಹಳು;

ಕೃಷ್ಣನ  ಪಾದಾಂಬುಜಗಳ ಮೇಲೆ, ಮಂಜಿನ ಹನಿಗಳು ಹೊಳೆಯುತಿವೆ;
ಇಬ್ಬನಿಯಲ್ಲ, ಶ್ರೀ ಹರಿ ಪಾದವ ರಾಧೆಯ ಕಂಬನಿ ತೊಳೆಯುತಿವೆ;
ರಾಧೆಯ ಕಂಬನಿ ತೊಳೆಯುತಿವೆ;

ಕವಿ : ಹೆಚ್ ಎಸ್ ವೆಂಕಟೇಶ್ ಮೂರ್ತಿ
ಸಂಕಲನ : ತೂಗು ಮಂಚ 

No comments: