ಭೂಮಿ, ಚಂದ್ರರ ನಡುವೆ ಅಂತರವೆಷ್ಟಿದ್ದರೇನಂತೆ, ಚಂದ್ರನ ಆಕರ್ಷಣೆಗೆ ಭೂಮಿಯ ಮೇಲಿನ ಕಡಲ ಅಲೆಗಳು ಎದೆಯುಬ್ಬಿ ಬರುವುದಿಲ್ಲವೇ. ಅಂತೆಯೇ ಪ್ರೇಯಸಿ ಪ್ರಿಯತಮೆಯರು ದೈಹಿಕವಾಗಿ ಎಷ್ಟು ದೂರವಿದ್ದರೇನು, ಪ್ರೀತಿಯ ಆಕರ್ಷಣೆ ತಗ್ಗುವುದಿಲ್ಲ. ಎರಡೂ ತೀರಗಳ ನಡುವೆ ಸಂಚಿರಿಸುವ ವಿರಹದಲೆಗಳು ಎಂದಾದರೊಂದು ದಿನ ಭೇಟಿಗಾಗಿ ಹಾತೊರೆಯುತ್ತಿರುವ ಅವರಿಬ್ಬರೂ ಐಕ್ಯರಾಗುವುದಕ್ಕೆ ಪೂರಕವಗುದೆಂಬ ಆಶಾಭಾವ ಕವಿಯ ಮಾತುಗಳಲ್ಲಿ ಹೀಗೆ ಹೊರಬಂದಿದೆ.
ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ;
ನನ್ನೆದೆಯ ಕಡಲೇಕೆ ಬೀಗುತಿಹುದು.
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ;
ಗರಿಗೆದರಿ ಕನಸುಗಳು ಕಾಡುತಿಹುದು.
ಎದೆಗೆ ತಾಪದ ಉಸಿರು, ತೀಡಿ ತರುತಿದೆ ಅಲರು;
ನಿನ್ನ ಹುಣ್ಣಿಮೆ ನಗೆಯು ಚೀಡಿಸಿಹುದು.
ಬಳಿಗೆ ಬಾರದೆ ನಿಂತೆ, ಹೃದಯ ತುಂಬಿದೆ ಚಿಂತೆ;
ಜೀವ ನಿನ್ನಾಸರೆಗೆ ಕಾಯುತಿಹುದು.
ನಾನೊಂದು ದಡದಲ್ಲಿ, ನೀನೊಂದು ದಡದಲ್ಲಿ;
ನಡುವೆ ಮೈ ಚಾಚಿರುವ ವಿರಹದಳಲು.
ಯಾವ ದೋಣಿಯು ತೇಲಿ ಎಂದು ಬರುವುದೋ ಕಾಣೆ;
ನೀನಿರುವ ಬಳಿಯಲ್ಲಿ ನನ್ನ ಬಿಡಲು...
- ರಚನೆ: ಎಂ. ಏನ್. ವ್ಯಾಸ ರಾವ್
No comments:
Post a Comment