Sunday, December 19, 2010

kaaNada kaDalige hambaliside mana . . .

ಮನುಷ್ಯನ ಹಂಬಲಗಳು ಹಲವಾರು, ಅದು ಸ್ವಾಭಾವಿಕವೂ ಹೌದು. ಅವುಗಳಲ್ಲಿ ಪ್ರಾಪಂಚಿಕ ಆಡಂಬರಗಳನ್ನು ಬಯಸುವುವು ಕೆಲವಾದರೆ, ಸಾಧನೆಯ ಮೆಟ್ಟಿಳುಗಳನ್ನೇರಿ, ಗುರಿಯನ್ನು ತಲುಪುವ ಮಹದಾಸೆಗಳು ಕೆಲವು. ಮಾನವನ ಬಯಕೆಗಳು ಏನೇ ಇರಲಿ, ವಿಧಿ ಬರಹವನ್ನು ಮೀರಿ ಮೆರೆಯುವ ಸಾಮರ್ಥ್ಯ ಮನುಷ್ಯನಿಗಿಲ್ಲ. ವೈಜ್ಞಾನಿಕವಾಗಿ ಎಷ್ಟೇ ಅಭಿವೃದ್ಧಿ ಹೊಂದಿದರೂ ಅಜೇಯ, ಅಜಾತ, ಶಕ್ತಿಯೊಂದು ನಮ್ಮ ಸೂತ್ರವನ್ನು ಹಿಡಿದಿರುವುದು ನಿಜವಾಗಿದೆ. ವಿಧಿಯ ಫಲಾನುಫಲಗಳನ್ನರಿಯದೆ, ಕಷ್ಟಗಳಿಗೆ ಸಿಲುಕಿ, ಮರಳಿ ಪ್ರಯತ್ನವ ಮಾಡಿ ಬೇಸತ್ತಿರುವ ಜೀವವೊಂದು ಹತಾಶನಾಗದೆ ಗುರಿಯನ್ನು ಮುಟ್ಟುವ ತವಕದಲ್ಲಿ ತೊಳಲಾಡುತ್ತಿರುವ ಅಭಿವ್ಯಕ್ತಿ ಇಂತಿದೆ:

  ಕಾಣದ ಕಡಲಿಗೆ, ಹಂಬಲಿಸಿದೆ ಮನ
  ಕಾಣಬಲ್ಲೆನೇ  ಒಂದು ದಿನ
  ಕಡಲನು ಕೂಡಬಲ್ಲೆನೇ ಒಂದು ದಿನ . . .

  ಕಾಣದ ಕಡಲಿನ ಮೊರದದ  ಜೋಗುಳ,
  ಒಳಗಿವಿಗಿಂದು ಕೇಳುತಿದೆ.
  ನನ್ನ ಕಲ್ಪನೆಯು, ತನ್ನ ಕಡಲನೇ
  ಚಿತ್ರಿಸಿ ಚಿಂತಿಸಿ ಸುಯ್ಯುತಿದೆ.
  ಎಲ್ಲಿರುವುದೋ ಅದು, ಎಂತಿರುವುದೋ ಅದು,
  ನೋಡಬಲ್ಲೆನೆ ಒಂದು ದಿನ,
  ಕಡಲನು ಕೂಡಬಲ್ಲೇನೆ ಒಂದು ದಿನ.

  ಸಾವಿರ ಹೊಳೆಗಳು ತುಂಬಿ ಹರಿದರೂ
  ಒಂದೇ ಸಮನಾಗಿಹುದಂತೆ.
  ಸುನೀಲ ವಿಸ್ತಾರ ತರಂಗ ಶೋಭಿತ,
  ಗಂಭೀರಾಂಬುಧಿ ತಾನಂತೆ.
  ಮುನ್ನೀರಂತೆ, ಅಪಾರವಂತೆ. . .
  ಕಾಣಬಲ್ಲೆನೇ ಒಂದು ದಿನ
  ಅದರೊಳು ಕರಗಲಾರೆನೆ ಒಂದು ದಿನ.

  ಝಟಿಲ ಕಾನನದ ಕುಟಿಲ ಪಥಗಳಲಿ,
  ಹರಿವ ತೊರೆಯು ನಾನು. 
  ಎಂದಿಗಾದರೂ ಕಾಣದ ಕಡಲನು ಸೇರಬಲ್ಲೆನೇನು?
  ಸೇರಬಹುದೇ ನಾನು?
  ಕಡಲಿನ ನೀಲಿಯಲಿ ಕರಗಬಹುದೇ ನಾನು?

 - ರಚನೆ : ಜಿ. ಎಸ್. ಶಿವರುದ್ರಪ್ಪ 

2 comments:

gopalkrishna pai said...

Tumba adbhutavada hadu...

Chethan Narayana Murthy said...

ಹೌದು ಪೈ ಅವರೇ. ಅಭಿನಂದನೆಗಳು ಶಿವರುದ್ರಪ್ಪನವರಿಗೆ ಸಲ್ಲಬೇಕು.