Friday, September 24, 2010

Yava mohana muraLi kareyitho

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನೂ 
ಯಾವ ಬೃಂದಾವನವು ಸೆಳೆಯಿತೋ ನಿನ್ನ ಮಣ್ಣಿನ ಕಣ್ಣನು
ಯಾವ ಬೃಂದಾವನವು ಚಾಚಿತೋ ತನ್ನ ಮಿಂಚಿನ ಕಯ್ಯನು 

ಹೂವು ಹಾಸಿಗೆ ಚಂದ್ರ ಚಂದನ, ಬಾಹು ಬಂಧನ, ಚುಂಬನ
ಬಯಕೆ ತೋಟದ ಬೇಲಿಯೊಳಗೆ, ಕರಣ ಗಣದೀ ರಿಂಗಣಾ

ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ
ಮುಲೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ

ವಿವಶವಾಯಿತು ಪ್ರಾಣ: ಪರವಶವು ನಿನ್ನೀ ಚೇತನ 
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ...

ರಚನೆ : ಗೋಪಾಲ ಕೃಷ್ಣ ಅಡಿಗ 

Deepavu ninnade

ದೀಪವು ನಿನ್ನದೇ, ಗಾಳಿಯು ನಿನ್ನದೇ 
ಆರದಿರಲಿ ಬೆಳಕೂ...
ಕಡಲೂ ನಿನ್ನದೇ, ಹಡಗೂ ನಿನ್ನದೇ
ಮುಳುಗದಿರಲಿ ಬದುಕೂ...

ಬೆಟ್ಟವು ನಿನ್ನದೇ, ಬಯಲೂ ನಿನ್ನದೇ
ಹಬ್ಬಿನದಲಿ ಪ್ರೀತಿ...
ನೆಳಲೋ ಬಿಸಿಲೂ ಎಲ್ಲವು ನಿನ್ನವೇ
ಇರಲಿ ಏಕ ರೀತಿ...

ಆಗೊಂದು ಸಿಡಿಲು, ಈಗೊಂದು ಮುಗಿಲು
ನಿನಗೆ ಅಲಂಕಾರ...
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು 
ನನಗೆ ನಮಸ್ಕಾರ...

ಅಲ್ಲಿ ರಣ ದುಂದುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿ ಧ್ವನಿ...
ಆ ಮಹಾ ಕಾವ್ಯ, ಈ ಭಾವ ಗೀತೆ 
ನಿನ್ನ ಪದ ಧ್ವನಿ...

- ರಚನೆ : ಕೆ. ಎಸ್. ನರಸಿಂಹ ಸ್ವಾಮಿ 

IshTu kaala ottigiddu ...

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ 
ಅರಿತೆವೇನು ನಾವು ನಮ್ಮ ಅಂತರಾಳವ 

ಕಡಲ ಮೇಲೆ ಸಾವಿರಯು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ 

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೆನು ನೀಲಿ ಬಾನಿಗೆ

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ 

- ರಚನೆ: ಡಾ|| ಏನ್ ಎಸ್ ಲಕ್ಷ್ಮಿ ನಾರಾಯಣ ಭಟ್ಟ 

Nee sigade baaLondu baaLe...

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣಾ . . .
ನಾ ತಾಳಲಾರೆ, ಈ ವಿರಹಾ ಕೃಷ್ಣಾ . . .

ಕಮಲವಿಲ್ಲದ ಕೆರೆ ನನ್ನ ಬಾಳು
ಚಂದ್ರ ಇಲ್ಲದ ರಾತ್ರಿ ಬೀಳು 
ನೀ ಸಿಗದೇ ಉರಿ ಉರಿ ಕಳೆದೆ ಇರುಳ 
ಮಾತೆಲ್ಲ ಬಿಗಿದಿದೆ ದುಃಖ ಕೊರಳ

ಅಣ್ಣ ಸೇರದು ನಿದ್ದೆ ಬಂದುದೆಂದು
ಕುದಿವೆ ಒಂದೇ ಸಮ ಕೃಷ್ಣಾ ಎಂದು 
ಯಾರು ಅರಿವರೋ ಹೇಳು ನನ್ನ ನೋವ
ತಲ್ಲಣಿಸಿ ಕೂಗುತಿದೆ ದಾಸಿ ಜೀವ

ಒಳಗಿರುವ ಗಿರಿಧರನೇ ಹೊರಗೆ ಬಾರೋ
ಕಣ್ಣೆದುರು ನಿಂತು ಆ ರೂಪ ತೋರೋ 
ಜನುಮ ಜನುಮದ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೇ ಅದರ ರೀತಿ

- ರಚನೆ : - ಡಾ. ಎನ್. ಎಸ್. ಲಕ್ಷಿ ನಾರಾಯಣ ಭಟ್ಟ