Wednesday, November 24, 2010

Toura sukhadoLagenna maretihaLu ennadiri

ಪ್ರೇಯಸಿ, ಪ್ರಿಯಕರರ ವಿರಹ ಯಾತನೆಯನ್ನು ವರ್ಣಿಸುವ ಹಲವಾರು ಪದ್ಯಗಳನ್ನು ಕೇಳಿದ್ದೇವೆ. ದಂಪತಿಗಳಿಬ್ಬರ ವಿರಹ ವೇದನೆಯನ್ನು, ಪ್ರೀತಿಯ ಬಾಂಧವ್ಯಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ನರಸಿಂಹ ಸ್ವಾಮಿಯವರ ಈ ಪದ್ಯ ವಿಶಿಷ್ಟವಾದುದು. ಕಾರಣಾಂತರಗಳಿಂದ ತವರು ಮನೆಯಲ್ಲಿ ಹಲವುದಿನ ಉಳಿಯಬೇಕಾದ ಹೆಣ್ಣು, ತನ್ನ ಗಂಡನನ್ನು ಓಲೈಸುವ ಪರಿ ಇಂತಿಹುದು: 

    ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ, 
    ನಿಮ್ಮ ಪ್ರೆಮವನೀವೆ ಒರಯನಿತ್ತು.
    ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ,
    ಇರುಳಿನಲಿ ಕಾಡುವುದು, ನಿಮ್ಮ ನೆನಪು...
    ಇರುಳಿನಲಿ ಕಾಣುವುದು, ನಿಮ್ಮ ಕನಸು...

    ಬೃಂದಾವನದ ಹಣೆಗೆ ಕುಂಕುಮವನಿಡುವಾಗ,
    ಕಾಣುವವು ಶ್ರೀ ತುಳಸಿ, ಕೃಷ್ಣ ತುಳಸಿ;
    ನೀಲಾಂಬರದ ನಡುವೆ ಚಂದಿರನು ಬಂದಾಗ,
    ರೋಹಿಣಿಯು ಬೆಳಗುವಳು ಸನ್ನಿಧಿಯಲಿ.

    ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ
    ಇನ್ನು ತಂಗಿಯ ಮದುವೆ ತಿಂಗಳಿಹುದು;
    ತೌರ ಪಂಜರದೊಳಗೆ ಸೆರೆಯಾದ ಗಿಣಿಯಲ್ಲ,
    ಐದು ತಿಂಗಳ ಕಂದ ನಗುತಲಿಹುದು.

    ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ 
    ಮೈಸೂರ ಸೇರುವುದ ನಾನು ಬಲ್ಲೆ 
    ನಾಳೆ ಮಂಗಳವಾರ, ಮಾರನೆಯ ದಿನ ನವಮಿ,
    ಆಮೇಲೆ ನಿಲ್ಲುವೇನೆ ನಾನು ಇಲ್ಲಿ...
    ಮರೆತಿಹಳು ಎನ್ನದಿರಿ, ಕಣ್ಮರೆಯ ತೋಟದಲಿ, 
    ಅಚ್ಚ ಮಲ್ಲಿಗೆಯರಳು ಬಿರಿಯುತಿಹುದು;
    ಬಂದುಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ,
    ಚುಚ್ಚದಿರಿ ಮೊನೆಯಾದ ಮಾತನೆಸೆದು...

- ರಚನೆ: ಕೆ ಎಸ್ ನರಸಿಂಹ ಸ್ವಾಮಿ 

Sunday, November 14, 2010

Nanna iniyana neleya balleyene

ನನ್ನ ಇನಿಯನ ನೆಲೆಯ ಬಲ್ಲೆಯೇನೆ 
ಹೇಗೆ ತಿಳಿಯಲಿ ಅದನು ಹೇಳೇ ನೀನೆ 

ಇರುವೆ ಸರಿಯುವ ಸದ್ದು
ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳಬಲ್ಲ
ನನ್ನ ಮೊರೆಯನು ಏಕೆ ಕೇಳಲೊಲ್ಲ

ಗಿರಿಯ ಎತ್ತಲು ಬಲ್ಲ
ಶರಧಿ ಬತ್ತಿಸಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲ್ಲಿಸಬಲ್ಲ 
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ

ನೀರು ಮುಗಿಲಾದವನು
ಮುಗಿಲು ಮಳೆಯಾದವನು 
ಮಳೆ ಬಿದ್ದು ತೆನೆಎದ್ದು ತೂಗುವವನು
ನಲ್ಲೆ ಅಳಲನು ಏಕೆ ತಿಳಿಯನವನು 

- ರಚನೆ: ಡಾ|| ಏನ್ ಎಸ್ ಲಕ್ಷ್ಮಿ ನಾರಾಯಣ ಭಟ್ಟ 

Friday, September 24, 2010

Yava mohana muraLi kareyitho

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನೂ 
ಯಾವ ಬೃಂದಾವನವು ಸೆಳೆಯಿತೋ ನಿನ್ನ ಮಣ್ಣಿನ ಕಣ್ಣನು
ಯಾವ ಬೃಂದಾವನವು ಚಾಚಿತೋ ತನ್ನ ಮಿಂಚಿನ ಕಯ್ಯನು 

ಹೂವು ಹಾಸಿಗೆ ಚಂದ್ರ ಚಂದನ, ಬಾಹು ಬಂಧನ, ಚುಂಬನ
ಬಯಕೆ ತೋಟದ ಬೇಲಿಯೊಳಗೆ, ಕರಣ ಗಣದೀ ರಿಂಗಣಾ

ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ
ಮುಲೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ

ವಿವಶವಾಯಿತು ಪ್ರಾಣ: ಪರವಶವು ನಿನ್ನೀ ಚೇತನ 
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ...

ರಚನೆ : ಗೋಪಾಲ ಕೃಷ್ಣ ಅಡಿಗ 

Deepavu ninnade

ದೀಪವು ನಿನ್ನದೇ, ಗಾಳಿಯು ನಿನ್ನದೇ 
ಆರದಿರಲಿ ಬೆಳಕೂ...
ಕಡಲೂ ನಿನ್ನದೇ, ಹಡಗೂ ನಿನ್ನದೇ
ಮುಳುಗದಿರಲಿ ಬದುಕೂ...

ಬೆಟ್ಟವು ನಿನ್ನದೇ, ಬಯಲೂ ನಿನ್ನದೇ
ಹಬ್ಬಿನದಲಿ ಪ್ರೀತಿ...
ನೆಳಲೋ ಬಿಸಿಲೂ ಎಲ್ಲವು ನಿನ್ನವೇ
ಇರಲಿ ಏಕ ರೀತಿ...

ಆಗೊಂದು ಸಿಡಿಲು, ಈಗೊಂದು ಮುಗಿಲು
ನಿನಗೆ ಅಲಂಕಾರ...
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು 
ನನಗೆ ನಮಸ್ಕಾರ...

ಅಲ್ಲಿ ರಣ ದುಂದುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿ ಧ್ವನಿ...
ಆ ಮಹಾ ಕಾವ್ಯ, ಈ ಭಾವ ಗೀತೆ 
ನಿನ್ನ ಪದ ಧ್ವನಿ...

- ರಚನೆ : ಕೆ. ಎಸ್. ನರಸಿಂಹ ಸ್ವಾಮಿ 

IshTu kaala ottigiddu ...

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ 
ಅರಿತೆವೇನು ನಾವು ನಮ್ಮ ಅಂತರಾಳವ 

ಕಡಲ ಮೇಲೆ ಸಾವಿರಯು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ 

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೆನು ನೀಲಿ ಬಾನಿಗೆ

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ 

- ರಚನೆ: ಡಾ|| ಏನ್ ಎಸ್ ಲಕ್ಷ್ಮಿ ನಾರಾಯಣ ಭಟ್ಟ 

Nee sigade baaLondu baaLe...

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣಾ . . .
ನಾ ತಾಳಲಾರೆ, ಈ ವಿರಹಾ ಕೃಷ್ಣಾ . . .

ಕಮಲವಿಲ್ಲದ ಕೆರೆ ನನ್ನ ಬಾಳು
ಚಂದ್ರ ಇಲ್ಲದ ರಾತ್ರಿ ಬೀಳು 
ನೀ ಸಿಗದೇ ಉರಿ ಉರಿ ಕಳೆದೆ ಇರುಳ 
ಮಾತೆಲ್ಲ ಬಿಗಿದಿದೆ ದುಃಖ ಕೊರಳ

ಅಣ್ಣ ಸೇರದು ನಿದ್ದೆ ಬಂದುದೆಂದು
ಕುದಿವೆ ಒಂದೇ ಸಮ ಕೃಷ್ಣಾ ಎಂದು 
ಯಾರು ಅರಿವರೋ ಹೇಳು ನನ್ನ ನೋವ
ತಲ್ಲಣಿಸಿ ಕೂಗುತಿದೆ ದಾಸಿ ಜೀವ

ಒಳಗಿರುವ ಗಿರಿಧರನೇ ಹೊರಗೆ ಬಾರೋ
ಕಣ್ಣೆದುರು ನಿಂತು ಆ ರೂಪ ತೋರೋ 
ಜನುಮ ಜನುಮದ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೇ ಅದರ ರೀತಿ

- ರಚನೆ : - ಡಾ. ಎನ್. ಎಸ್. ಲಕ್ಷಿ ನಾರಾಯಣ ಭಟ್ಟ  

Wednesday, July 7, 2010

Amma.... Ninna edeyaaLadalli

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ತಡಿಯಲೊಲ್ಲೇ ನೀ ಕರುಳಬಳ್ಳಿ,
ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ
ನಾ ಕಲಿವೆ ಊರ್ಧ್ವಗಮನ
ಓ ಅಗಾಧ ಗಗನ

ಮೇಲೆ ಹಾರಿ ನಿನ್ನ ಸೆಳೆತ ಮೀರಿ
ನಿರ್ಭರ ಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ 
ಇಂಧನ ತೀರಲು ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ, ಮೂರ್ತ ಪ್ರೇಮದೆಡೆಗೆ

- ರಚನೆ: ಬಿ. ಆರ್. ಲಕ್ಷ್ಮಣ್ ರಾವ್