ಮಿಡುಕಾಡುತಿರುವೆ ನಾನು
ತಡಿಯಲೊಲ್ಲೇ ನೀ ಕರುಳಬಳ್ಳಿ,
ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ
ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ
ನಾ ಕಲಿವೆ ಊರ್ಧ್ವಗಮನ
ಓ ಅಗಾಧ ಗಗನ
ಮೇಲೆ ಹಾರಿ ನಿನ್ನ ಸೆಳೆತ ಮೀರಿ
ನಿರ್ಭರ ಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ, ಮೂರ್ತ ಪ್ರೇಮದೆಡೆಗೆ
- ರಚನೆ: ಬಿ. ಆರ್. ಲಕ್ಷ್ಮಣ್ ರಾವ್